ಟೈಷೊ
1879-1926. ಜಪಾನಿನ ಚಕ್ರವರ್ತಿ (1912-1926). ಚಕ್ರವರ್ತಿ ಮೇಜಿನ ಮೂರನೆಯ ಮಗ. 1879ರ ಆಗಸ್ಟ್ 31ರಂದು ಟೋಕಿಯೋದಲ್ಲಿ ಹುಟ್ಟಿದ. ಇವನ ವ್ಯಕ್ತಿನಾಮ ಯೊಷಿಹಿಟೊ. ಮೇಜಿಯ ಹಿರಿಯ ಮಕ್ಕಳಿಬ್ಬರೂ ಚಿಕ್ಕ ವಯಸ್ಸಿನಲ್ಲಿ ಸತ್ತುದರಿಂದ ಯೊಷಿಹಿಟೊ 1889ರ ನವೆಂಬರ್ 3ರಂದು ಯುವರಾಜನೆಂದು ಘೋಷಿತನಾದ. ರಾಜಕುಮಾರ ಕುಜೋನ ಮಗಳನ್ನು 1900 ರಲ್ಲಿ ಮದುವೆಯಾದ. ಇವನಿಗೆ ಹಿರೊಹಿಟೊ, ಯಾಸೂಹಿಟೊ, ನೊಬೂಹಿಟೊ ಮತ್ತು ಟಾಕಾಯಿಟೊ ಎಂಬ ನಾಲ್ವರು ಗಂಡು ಮಕ್ಕಳು. ತಂದೆ ಮೇಜಿ ಚಕ್ರವರ್ತಿ 1912 ರ ಜುಲೈ 30ರಂದು ಮರಣ ಹೊಂದಿದಾಗ ಈತ ಚಕ್ರವರ್ತಿಯಾದ; ಈತ ಟೈಷೊ (ಮಹಾಧರ್ಮಾತ್ಮ) ಎಂಬ ಹೆಸರು ತಳೆದದ್ದು ಆಗ. ಚಕ್ರವರ್ತಿ ಮೇಜಿಯ ಕಾಲದಲ್ಲಿ ಆರಂಭವಾಗಿದ್ದ ಆಧುನೀಕರಣ ಮತ್ತು ಪಾಶ್ಚಾತೀಕರಣ ಪ್ರಯತ್ನಗಳು ಟೈಷೋನ ಆಳ್ವಿಕೆಯಲ್ಲಿ ಮುಂದುವರಿದುವು. ಬ್ರಿಟನ್ ಮತ್ತು ಅಮೆರಿಕಗಳಿಗೆ ಅನುಕೂಲಕರವಾದ ನೀತಿಯನ್ನು ಟೈಷೊ ಅನುಸರಿಸಿದ. ಇವನ ಸರ್ಕಾರ ಒಂದನೆಯ ಮಹಾಯುದ್ಧದಲ್ಲಿ ಮಿತ್ರ ರಾಷ್ಟ್ರಗಳ ಪರವಾಗಿತ್ತು. ಸೈಬೀರಿಯದಲ್ಲಿ ಬಾಲ್ಷೆವಿಕ್ ಆಡಳಿತವನ್ನು ವಿರೋಧಿಸಿತು. ವಾಷಿಂಗ್ಟನ್ನಿನಲ್ಲಿ ನಡೆದ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಭಾಗವಹಿಸಿತು. ಟೈಷೊನ ಆಳ್ವಿಕೆಯಲ್ಲಿ ಜಪಾನಿನಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆಗಳಾದವು. ಸಂಸದೀಯ ವಿಧಾನಗಳು ರೂಪಿತವಾದವು. ಮತ ಚಲಾವಣಾ ಹಕ್ಕು ವಿಸ್ತøತಗೊಂಡಿತು. ಇಷ್ಟಾದರೂ ಚಕ್ರವರ್ತಿ ಟೈಷೊ ರಾಜಕೀಯವಾಗಿ ಮುಖ್ಯಪಾತ್ರವನ್ನೇನೂ ವಹಿಸಲಿಲ್ಲ. ಕಡೆಗಾಲದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡ. ಇವನ ಹಿರಿಯ ಮಗ ಹಿರೊಹಿಟೊ ರಾಜಕುಮಾರ ಪ್ರತಿನಿಧಿಯಾಗಿ 1921 ರಲ್ಲಿ ನೇಮಕವಾದ ಅನಂತರ ಟೈಷೊ ಕೊನೆಯ ವರೆಗೆ ಏಕಾಂತವಾಗಿಯೇ ಇದ್ದ. 1926 ರ ಡಿಸೆಂಬರ್ 25ರಂದು ಹಯಾಮ ಎಂಬಲ್ಲಿ ತೀರಿಕೊಂಡ.
(ಕೆ.ಪಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ